Friday 24 September 2010

ಸಾಂಬರ‍್ ಬೇಕು ಅಂದ್ರೆ, ಡಬ್ಬಿ ತರಬೇಕು...!!

ಮಹಿಳೆ: ಸ್ವಾಮಿ, ಒಂದು ಪ್ಲೇಟ್ ಇಡ್ಲಿ ಪಾರ್ಸಲ್ ಕೊಡಿ.
ಹೋಟೆಲ್ ಮಾಲಿಕ: ಒಂದು ಇಡ್ಲಿ ಪಾರ್ಸಲ್ ಮಾಡಪ್ಪ. ಏನಮ್ಮ.. ಡಬ್ಬಿ ತಂದಿದಿಯೇನಮ್ಮ?
ಮಗ: ಏಕೆ ಸಾರ‍್.. ಇಲ್ಲ ಸಾರ‍್..
ಹೋಟೆಲ್ ಮಾಲಿಕ: ನೋಡಪ್ಪಾ, ಇಡ್ಲಿಗೆ ಸಾಂಬರ‍್ ಬೇಕು ಅಂದ್ರೆ, ಡಬ್ಬಿ ತರಬೇಕು.
ಮಗ: ಸರ‍್ ಇಲ್ಲ.. ನಾವು ಡಬ್ಬಿ ತಂದಿಲ್ಲ..
ಹೋಟೆಲ್ ಮಾಲಿಕ: ಹಾಗದ್ರೆ, ಸಾಂಬಾರ‍್ ಕೊಡೋಕಾಗಲ್ಲಪ್ಪ..
ಮಹಿಳೆ: ಸ್ವಾಮಿ, ನಾವು ಬೇರೆ ಊರಿಂದ ಬಂದಿರೋದು ಸ್ವಾಮಿ. ನಮ್ಮ ಹತ್ರ ಡಬ್ಬಿ ಇಲ್ಲ ಸ್ವಾಮಿ.
ಮಗ:  ಸಾರ‍್, ಪ್ಲಾಸ್ಟಿಕ್ ಕವರ್‌ನಲ್ಲಿ ಕಟ್ಟಿ ಕೊಡಿ ಸಾರ‍್.
ಹೋಟೆಲ್ ಮಾಲಿಕ: ಇಲ್ಲಪ್ಪ. ನಾವು ಪ್ಲಾಸ್ಟಿಕ್ ಕವರನಲ್ಲಿ ಏನೂ ಕೊಡಲ್ಲ.
ಮಹಿಳೆ: ಸ್ವಾಮಿ, ನೋಡಿ ಸ್ವಾಮಿ, ಎನಾದ್ರೂ ಮಾಡಿ.
ಮಗ: ಸಾರ‍್, ಪ್ಲೀಸ್ ಸರ‍್. ಹೆಂಗಾದ್ರೂ ಕೊಡಿ ಸರ‍್..
ಹೋಟೆಲ್ ಮಾಲಿಕ: ಇಲ್ಲ ಅಂದ್ನಲ್ಲಪ್ಪ. ನಮ್ಮ ಹತ್ತಿರ ಪ್ಲಾಸ್ಟಿಕ್‌ ಕವರ್ರೇ ಇಲ್ಲಪ್ಪ..
ಮಹಿಳೆ: ನೋಡಿ ಸ್ವಾಮಿ, ಎನಾದ್ರೂ ಮಾಡಿ ಸ್ವಾಮಿ.
ಹೋಟೆಲ್ ಮಾಲಿಕ: ಇಲ್ಲಮ್ಮಾ, ಸಾಂಬರ‍್ ಬೇಕು ಅಂದ್ರೆ, ಡಬ್ಬಿ ತರಬೇಕು. ಕವರ್‌ನಲ್ಲಿ ಎನೂ ಸಿಗೋಲ್ಲ. ನಮ್ಮಲ್ಲಿ ಪ್ಲಾಸ್ಟಿಕ್ ಕವರ್ರೇ ಇಲ್ಲಮ್ಮ. ಬೇಕಾದ್ರೆ, ಚಟ್ನಿ ಕಟ್ಟಿಕೊಡ್ತೇವೆ. ಅಷ್ಟೇ ಅಮ್ಮ.. ಏ ಚಟ್ನಿ ಒಂದೇ ಕಟ್ಟಿಕೊಡಪ್ಪ. ಡಬ್ಬಿ ತಂದಿಲ್ಲ ಅವ್ರು.

ಎನೋ, ಪರಿಸರ ಕಾಳಜಿಗಾಗಿ, ಒಂದು ಕಿರು ನಾಟಕ ರಚಿಸ್ತಾ ಇದೀನಿ ಅನ್ಕೊಂಡ್ರಾ...?
ಈ ರೀತಿ ನಿಜ ಜೀವನದಲ್ಲಿ ನಡೆದರೆ ಎಷ್ಟು ಚೆನ್ನಾ ಅನ್ಕೋತಿದಿರಾ...?
ಆದರೇ, ಯಾವ ಹೋಟೆಲ್‌ನವ್ರು ಈ ಪ್ಲಾಸ್ಟಿಕ್ ತ್ಯಜಿಸಿ ಅಭಿಯಾನವನ್ನೆಲ್ಲಾ ಇಷ್ಟೊಂದು ಗಂಭೀರವಾಗಿ ತೆಗೋತಾರೆ ಅಂತೀರಾ? ತೆಗೆಂಡ್ರೂ ಎಷ್ಟು ದಿನ ಸ್ವಾಮಿ..? ಅಂತೀರಾ..?
ನಾನು ನಿಮ್ಮ ಮಾತಿಗೆ, ಹೂಂ.. ಅನ್ನೋನೆ..
ಆದರೆ, ಈ ಮೇಲಿನ ಮಾತು ಕೇಳುವ ಮುನ್ನ, ಇದನ್ನೇ, ನಾನೂ ಯೋಚಿಸುತ್ತಿದ್ದೆ.
ಇದು, ಮೊನ್ನೆ ಬೆಳಿಗ್ಗೆ, ಶಿವಮೊಗ್ಗದಲ್ಲಿ, ಯಾವುದೋ ಕೆಲಸದ ನಿಮಿತ್ತ, ಬೆಳಿಗ್ಗೆಯ ತಿಂಡಿ ಹೊರಗೇ ಮಾಡಬೇಕಾಗಿ ಬಂದಾಗ, "ಶೋಭ ಟಿಫನ್ ರೂಂ" ಭೇಟಿ ಇತ್ತಾಗ, ಕೇಳಿದ, ಕಂಡ ಘಟನೆ.
ನಾನು ನನ್ನ ಸ್ನೇಹಿತರೊಂದಿಗೆ, ಅಲ್ಲಿ ಭೇಟಿ ಇತ್ತಾಗ, ಅಲ್ಲಿ ಮೊದಲು ನಾನು ಕಂಡದ್ದು ಈ ಕೆಳಕಂಡ ಬೋರ್ಡ್. ಪಕ್ಕದಲ್ಲಿ ನಗರಸಭೆ ಕರಪತ್ರ.
ಸಾಂಬರ್‌ಗೆ ಡಬ್ಬಿಯೇ ಆಗಬೇಕು
ಹಾ.. ನಾನು ಎಂದಿನಂತೆ, ಯೋಚಿಸಲಾರಂಭಿಸಿದೆ, "ಎಷ್ಟು ಗಂಭೀರವಾಗಿ ಇವರು ಇದನ್ನ ತೆಗೆದುಕೊಂಡಿದಾರಪ್ಪಾ?" ಅಂತ..
ಬೋರ್ಡೇನೋ ಎಲ್ಲರೂ ಹಾಕ್ತಾರಪ್ಪ.. ಕಾರ್ಯ ಸಾಧನೆ, ಎಷ್ಟರ ಮಟ್ಟಿಗೆ ಅನ್ನೋ ಯೋಚನೆ ಮಾಡುತ್ತಾ ತೆಗೆದುಕೊಂಡಿದ್ದ ಇಡ್ಲಿ ಮೆಲ್ಲುತ್ತಾ ಇದ್ದಾಗ, ಇದ್ದಕ್ಕಿಂದಂತೆ, ಈ ಸಂಭಾಷಣೆ, ಶುರುವಾಯ್ತು ನೋಡಿ. ಒಂದೆರಡು ಪೋಟೋ ತೆಗೆದುಕೊಳ್ಳೋಣ ಅಂತ ಮಾಲಿಕರ ಒಪ್ಪಿಗೆ ಪಡೆಯೋಣ ಅಂತ ಅವರ ಬಳಿ ಕೇಳಿದಾಗ, "ಎನಕ್ಕೆ?" ಅಂತ ಕೇಳಿದರು. "ಸರ‍್, ಹೀಗೆ, ಇಂಟರ್ನೆಟ್‌ನಲ್ಲಿ ಲೇಖನ ಹಾಕುವ ಅಂತಿದೀನಿ"
ಅಂದಾಗ. "ಹಾ.. ಸರಿ.." ಅಂತೊಂದು ಒಪ್ಪಿಗೆ ಕೊಟ್ರು. "ಸರ‍್.. ಒಂದು ನಿಮ್ಮ ಫೋಟೋ" ಅಂದ್ರೆ.. "ಹೇ..ಹೇ.. ಬೇಡ.. ಮಾಲಿಕರು ಒಳಗಿದ್ದಾರೆ.. ನಾನಲ್ಲ.. !!" ಅಂತದ್ದು ನನ್ನ ಮೊಬೈಲ್ ಕ್ಯಾಮರಾಕ್ಕೆ ಒಂದು ಕೈ ಅಡ್ಡ ಮಾಡಿ ಇನ್ನೊಂದು ಕೈ ಒಳ ತೋರಿಸಿದರು. ಬಹುಷಃ ಅವರಣ್ಣ ಇರಬೇಕು. 
ಶಿವಮೊಗ್ಗ ನಗರಸಭೆ ಕರಪತ್ರಅವರ ಗಂಭೀರ ವದನ ನೋಡಿದ ನನಗೆ, ಯಾಕೋ ಹೆದರಿಕೆಯಾಗಿ, ಅವರ ಫೋಟೋ ತೆಗೆಯದೇ ಹಾಗೇ ಬಂದೆ. ಹಾಗೇ ಹಾಗದ್ರೆ, ಏನಪ್ಪಾ ಈಗ ಇವರು ಉಪಯೋಗಿಸುತ್ತಾ ಇರೋದು "ಪಾರ್ಸೆಲ್" ಕಟ್ಟೋಕೆ ಅನ್ಕೊಂಡಾಗ, ಕಂಡ ದೃಷ್ಯ, ಇದು..
 ಈ ರೀತಿಯ, ಪ್ಲಾಸ್ಟಿಕ್ ವಿರುದ್ಧದ ಪ್ರಯತ್ನಗಳು, ತರಕಾರಿ, ಸಾಮಾನು ತರುವಾಗ, ನಾವುಗಳೇ, ಪ್ಲಾಸ್ಟಿಕ್ ಬೇಡ ಅನ್ನವಂತದ್ದು ಹೆಚ್ಚಾಗಬೇಕಲ್ವೇ?
 ನಾವಾಗಿಯೇ ಪ್ರಯತ್ನಿಸಬಹುದಾದ ಎಷ್ಟೋ ಕ್ರಿಯೆಗಳಿಗೆ, ನಾವಾಗಿಯೇ, "ನಾನೊಬ್ಬ ಮಾಡಿದ್ರೇನು ಮಹಾ? ಏನು ಅಂತಾ ವ್ಯತ್ಯಾಸ ಅಗೋದು?" ಅನ್ನೋದನ್ನ ಬಿಟ್ಟು, ನನ್ನೊಬ್ಬನ್ನಿಂದಲಾದರೂ, ಈ ಕೆಲಸ ಆಗಲಿ ಅನ್ನೋಣವೇ?

ಶೋಭಾ ಟಿಫನ್ ರೂಂ - ಶಿವಮೊಗ್ಗನಾನು ಈ ಕೆಲಸ ಶುರು ಹಚ್ಕೊಂಡು, ಬಹಳ ವರ್ಷವೇ ಅಗೋಗಿದೆ. ಅದನ್ನ ಲೆಕ್ಕ ಹಾಕಿದರೆ, ಏನಿಲ್ಲಾ ಅಂದ್ರೂ, ಒಂದು, ೫೦೦-೧೦೦೦ನೋ ಪ್ಲಾಸ್ಟಿಕ್‌ ಕವರ‍್ ತಡೆದಿರಬಹುದು. ಗೊತ್ತಿಲ್ಲ.. ಅಂದಾಜಿಲ್ಲ..
ನಮ್ಮ ಸುತ್ತಮುತ್ತಲೂ ಇಂತ ಹಲವಾರು ಜನಗಳು ಸಿಗಬಹುದು.
ಸ್ವಲ್ಪ ನಾವೆಲ್ಲರೂ.. ಗಂಭೀರವಾಗೇ.. ಯೋಚಿಸಿದರೆ, ಚೆನ್ನ ಅಲ್ಲವೇ?

ಹಾಗೇ.. ಶೋಭ ಟಿಫನ್ ರೂಂರವರ ಇನ್ನೋಂದಿಷ್ಟು.. ಕೆಲಸ ನಿಮಗೆ ಪರಿಚಯಿಸೋಣ ಅನ್ನಿಸಿತು..
ಎಷ್ಟೋ ಜನ ಮಾಡ್ತಾ ಇರಬಹುದು, ಆದರೂ ಒಮ್ಮೆ ನಿಮ್ಮೊಡನೆ ಹಂಚಿಕೊಳ್ಳೋಣ ಅನ್ನಿಸಿತು..
ಟಿಫನ್‌ರೂಂನ ಹುಡುಗನಿಂದ, ದನಕ್ಕೆ ಪೋಷಣೆ.. :) 
ಇಡ್ಲಿ - ಹಸುವಿಗೆ

ದನ ಕರುಗಳಿಗೆ ನೀರು:
ದನ ಕರುಗಳಿಗೆ ನೀರು












ನಿಮ್ಮೊಲವಿನ,
ಸತ್ಯ.. :)